Tagged under:

ಮತ್ತೆ ಮರಳಿದ ಜಾತ್ರೆ ನೆನಪು

 
ಬೆಂಗಳೂರಿನ ಮಾಲ್ ನ ಗದ್ದಲಕ್ಕೂ ಹಳ್ಳಿಯಲ್ಲಿ ಜರಗುವ ಜಾತ್ರೆಯ  ಆರ್ಭಟಕ್ಕೂ ಅಜಗಜಾಂತರ ವ್ಯತ್ಯಾಸ. ಮಾಲ್ ಅಂದರೆ  ಥಟ್ಟನೆ ಇಣುಕೋದು  ಕಣ್ಣು ಕುಕ್ಕುವ ಲೈಟ್ ಗಳು, ಎತ್ತರದ ಕಾಂಕ್ರೀಟ್ ಬಿಲ್ಡಿಂಗ್, ಕೃತಕ ಹಂದರದಲ್ಲಿ  ಜೋಡಿಸಿದ ಬಣ್ಣ ಬಣ್ಣದ ಮಳಿಗೆಗಳು, ಕೃತಕ ತಂಪು ಗಾಳಿ, ಆಕಾಶವು ಬೀಳಲಿ ಮೇಲೆ ನಾನೆಂದು ಕೈ ಬಿಡೆನು ಹಾಡಿಗೆ ಪರ್ಫೆಕ್ಟ್  ಏಕ್ಸಾಂಪಲ್ಲು  ಅನ್ನೋ ತರಹ ಮೈ ಗೆ  ಮೈ ಲಗತ್ತಿಸಿ  ತಬ್ಬಿಕೊಂಡು ಹೆಜ್ಜೆ ಇಡುವ  ಜೋಡಿಗಳು. ..........

....ಉಹ್! ಇಲ್ಲಿ ಎಲ್ಲವೂ ಕೃತಕಮಯ.ಅರ್ಧ ಗಂಟೆ ಕರೆಂಟು ಹರಿಯೋದು ನಿಂತರೆ ಗೊತ್ತಾಗುತ್ತೆ ಈ ಮಾಲ್ ಗಳ ನಿಜವಾದ ಬಣ್ಣ.
ಇನ್ನು ಊರಲ್ಲಿ ಹೂಡುತ್ತಿದ್ದ  ಜಾತ್ರೆ ಮೆಲಕು ಹಾಕಿದರೆ ನೆನಪುಗಳು ಒಂದೊಂದಾಗಿ ಮುಖದಲ್ಲಿ ನಗು ಚೆಲ್ಲುತ್ತ ಕಣ್ಮುಂದೆ ನಿಲ್ಲುತ್ತವೆ. ಜಾತ್ರೆಗೆಂದೇ ನಿರ್ದೇಶಿಸಿದ ನಾಟಕಗಳ ಭರ್ಜರಿ ಕಟ್ ಔಟ್ ಗಳು, ತಳಿರು ತೋರಣಗಳು ಊರಲ್ಲಿ ಜಾತ್ರೆಯ ಮುನ್ನ ಕಾಣಸಿಗುವ ಮಾಮೂಲಿ ದೃಶ್ಯಗಳು. ಇನ್ನು ಜಾತ್ರೆಯ ದಿನ, ಮನೆಯಿಂದ ಖರ್ಚಿಗೆ ಸಿಗುತ್ತಿದ್ದ ಕಾಸು, ಬೀದಿ ಬೀದಿಯಲ್ಲಿ ಹರಡುತ್ತಿದ್ದ ಬಜ್ಜಿ, ಜಿಲೇಬಿಯ ಕಮರು ವಾಸನೆ, ಚಿಕ್ಕ ಚಿಕ್ಕ ಟೆಂಟ್ ಗಳಲ್ಲಿ ತರ ತರಹದ  ಬಣ್ಣ ಬಣ್ಣದ ಆಟಿಗೆಗಳು, ದೊಡ್ಡ ದೊಡ್ಡ ಜೋಕಾಲಿ ಆಟ, ರಿಂಗ ತರಹ ತೂಗುವ ತಕ್ಕಡಿ ಆಟ, ಐಸ್ಕ್ರೀಂ, ಗುಡಿ, ಹೂವು ಕಾಯಿ ತಳಿರು ತೋರಣದಿಂದ ಶೃಂಗಾರಗೊಂಡ ಗುಡಿಯ ತೇರು, ಬಾಳೆ ಹಣ್ಣು , ಬಣ್ಣ ಬಣ್ಣದ ಬಲೂನುಗಳು, ತಲೆಗೆ ಮುದ ನೀಡುವ ಹೊಸ ಹೊಸ ಆಟಗಳು . . . . .. . ಈ ಪಟ್ಟಿ ಗೆ ಕೊನೆಯಿಲ್ಲ. ಜಾತ್ರೆಯ ಅಬ್ಬರವೇ  ಹಾಗಿತ್ತು . ಊರ ಅಗಸಿಯ ಮೈದಾನದಲ್ಲಿ ಜರಗುತ್ತಿದ್ದ ಓಕುಳಿ, ಹಾಲು ಗಂಬ ಏರುವ ಸ್ಪರ್ಧೆ, ಭಾರ ಎತ್ತುವ ಸ್ಪರ್ಧೆ, ಎತ್ತಿನ ಬಂಡಿ ಓಟ ಎಲ್ಲವೂ  ಹಳ್ಳಿಯ ಆಸಕ್ತರಿಗೆ ಸವಾಲಾಗಿರುತ್ತಿದ್ದವು. ಇನ್ನು ನೋಡುಗರಿಗೆ ಹಬ್ಬದೂಟ. ಸಂಜೆ ಮನೆಯವರೆಲ್ಲ ಜೊತೆಸೇರಿ  ಜಾತ್ರೆಗೆನ್ದೆ ಹೊಲಿಸಿದ  ಹೊಸ ಬಟ್ಟೆ ಹಾಕಿಕೊಂಡು ಜಾತ್ರೆಗೆ ನುಗ್ಗುತ್ತಿದ್ದೆವು. ಜೇಬಿನಲ್ಲಿದ್ದ  ಅಪ್ಪ ಕೊಟ್ಟ ಕಾಸು ಖರ್ಚು ಮಾಡದೆ ಅಜ್ಜಿಯ ಬೆನ್ನತ್ತಿ  ಹಠ ಮಾಡಿ ಮನದ ಬಯಕೆಯನ್ನು  ತೀರಿಸಿಕೊಳೋದರಲ್ಲಿ  ಖುಷಿ  ಅಡಗಿತ್ತು. ಒಂದು ಕೈಯಲ್ಲಿ  ಮುದುಡಿದ ಬಜ್ಜಿ ಮತ್ತೊಂದು ಕೈಯಲ್ಲಿ ಬಲೂನು ಹಿಡಿದುಕೊಂಡು ಅತ್ತಿತ್ತ ಇಣುಕುತ್ತ ಎಲ್ಲ ಮಳಿಗೆಗಳಿಗೂ ಹಾಯ್ದು ಬರುತ್ತಿದ್ದೆವು. ಕಾಡಿ ಬೇಡಿ ಪಡೆದ ಮೋಟರ್ ಗಾಡಿ  ಜಾರಿಬೀಳದಂತೆ ಜೇಬಿನಲ್ಲಿ ಭದ್ರವಾಗಿ ಇಟ್ಟು ಜಾತ್ರೆಯೆಲ್ಲೆಲ್ಲ ತಿರುಗಿದ  ಮೇಲೂ ಆಯಾಸ  ಕಿಂಚಿತ್ತೂ ಬಳಿಗೆ ಬರದು. ನೆರೆ ಹೊರೆಯವರೆಲ್ಲ ಕೀಟಲೆ ಮಾಡಿ ಬಜ್ಜಿ ಮೆತ್ತಿಕೊಂಡ  ಗಲ್ಲ ಹಿಂಡಿ  ಕೆಂಪಾಗಿಸಿದರೂ  ಹಿಂಸೆ ಅನಿಸದು .
ಕೊನೆಗೆ ಜಾತ್ರೆಯ ಹಿಂಡಿನಲ್ಲಿ ಜಿಗಿದು ಕೂಗಾಡಿ ಹೊರ ಬರುವ ಹೊತ್ತಿಗೆ ಕೈಯಲ್ಲಿನ ಬಲೂನು ಕುಗ್ಗಿ ಮನಸಿಗೆ ಬೇಡವಾಗಿರುತ್ತಿತ್ತು. ನನ್ನ ಬಾಡಿದ ಬಲೂನು ನೋಡಿದ ಅಜ್ಜಿ  ಮತ್ತೆ ಹೊಸ ದೊಡ್ಡ ಬಲೂನು ಕೈಗೆ ಇಡುತ್ತಿದ್ದರು. ಜಾತ್ರೆಗೆಂದೇ ಮನೆಯಿಂದ ಪಡೆದ ಕಾಸು ಖರ್ಚಾಗದೆ ಜೇಬಿನಲ್ಲಿ ಹಾಯಾಗಿ ಅಡಗಿರುತ್ತಿತ್ತು. ಆಗ ಪ್ರತಿಯೊಂದು ಕಾಸಿಗೂ  ರಾಜ ಮರ್ಯಾದೆ .  
ಮರುದಿನ ಅಕ್ಕ ಪಕ್ಕದ  ಗೆಳೆಯರೆಲ್ಲ ಜೊತೆಗೂಡಿ  ತಂದ ಆಟಿಗೆಗಳನ್ನು  ತೋರಿಸಿತ್ತ ಆಟವಾಡುತ್ತಿದ್ದೆವು.  ಆಟದಲ್ಲಿ ದಿನ ನಿತ್ಯ ಕಣ್ಣಿ ಗೆ ಗೋಚರಿಸುವ ಘಟನೆಗಳೇ ಜೀವಾಳ. ಗಂಡ ಹೆಂಡತಿ ಮನೆ ಮಕ್ಕಳು ಅಡುಗೆ ಹೊಲ ಗದ್ದೆ ಹೀರೋ ವಿಲ್ಲನ್  ಎಲ್ಲರೂ ಮನದ ಕಲ್ಪನೆಯ ಲೋಕದಿಂದ  ಇಳಿದು ಆಟಿಕೆಗಳಿಗೆ ಜೀವ ತುಂಬುತ್ತಿದ್ದರು. ಕೆಲವು ಸಲ ಚಿಕ್ಕ ವಿಷಯಕ್ಕೆ ಜಗಳ ಪ್ರಾರಂಭವಾದರೆ ಆಟ ಛೂ ಮಂತರ್  ಆಗಿಬಿಡೋದು. . ಮರುದಿನ ಮತ್ತೆ ಅದೇ ಗೆಳೆಯರು, ಆದರೆ ಹೊಸ ಆಟ, ಹೊಸ ಕಲ್ಪನೆ, ಅದೇ ಹಳೆ ಆಟಿಗೆಗಳು. ಮತ್ತೆ ರಂಗು ರಂಗಿನ ಜಾತ್ರೆ ಊರಲ್ಲಿ ಕಾಲಿಡುವವರೆಗೂ ಹಳೆ  ಆಟಿಕೆಗಳೇ ಮನದ ಕಲ್ಪನೆya   ನಾಗಾಲೋಟಕ್ಕೆ  ಇಂಬು ಕೊಡುತ್ತಿದ್ದ ಚಿಲುಮೆಗಳಾಗಿದ್ದವು .
ಈ ಹಳೆಯ ನೆನಪುಗಳೆಲ್ಲಾ ಒಂದೊಂದಾಗಿ ಇಲ್ಲಿ ಉದುರಿದ್ದು ಆಕಸ್ಮಿಕವಲ್ಲ. ದಸರಾ ಹಬ್ಬದಂದು ನಮ್ಮ ಮನೆಯ ಹತ್ತಿರದ  ಗುಡಿಯಲ್ಲಿ ಭರ್ಜರಿ ಜಾತ್ರೆ ಹೂಡಿತ್ತು.  ಸುತ್ತಮುತ್ತಲಿನ ಹಳ್ಳಿಗರೆಲ್ಲ ಕೂಡಿ ಜಾತ್ರೆಗೆ ನಮ್ಮೂರಿನ ಜಾತ್ರೆಯ ತರಹ ಮೆರಗು ತಂದಿದ್ದರು. ಬೆಂಗಳೂರಿನಲ್ಲಿ ಈ ತರಹದ ಸಂಭ್ರಮ ಅಪರೂಪ. ಸಂಜೆ ಹೂಡಿದ ಜಾತ್ರೆಯಲ್ಲಿ ನುಗ್ಗಿ ಹಳೆ ನೆನಪುಗಳನ್ನು ಮೆಲಕು ಹಾಕಿಕೊಂಡೆ.. ಅಲ್ಲಿ ಕ್ಲಿಕ್ಕಿಸಿದ ಕೆಲವು ಆಯ್ದ  ಚಿತ್ರಗಳು ನನ್ನ ಹಳೆಯ ನೆನಪುಗಳಿಗೆ ನೂಕಿದ್ದು .


ಆಗಲೇ ಬಜ್ಜಿ ಜಿಲೇಬಿ ವಾಸನೆ ಎಲ್ಲಡೆಯೂ ಹರಡಿತ್ತು. ನಾನು ರುಚಿ ನೋಡದೆ ಬಿಡ್ತೀನಾ . . .
ಈ ಆಟ ಗೊತ್ತಿರಬೇಕಲ್ಲ. ರಿಂಗು ಕಬಳಿಸುವ ವಸ್ತು ನಮ್ಮದೇ. ನೋಡಲು ಸುಲಭವೆನಿಸಿದರೂ  ತುಂಬಾ ಕಷ್ಟ. ಸ್ವಲ್ಪ ಹೊತ್ತು ತದೇಕಚಿತ್ತದಿಂದ ಆಟ ನೋಡಿದೆ. ಪ್ರಯತ್ನಿಸಲಿಲ್ಲ .

ಬಲೂನು ಮಾಮ. . ರೇಟ್ ಕೇಳಿದೆ. .  ೫  ರೂಪಾಯಿಗೆ ಒಂದು ಅಂತೆ. ಆಗೆಲ್ಲ ನಾಕಾಣೆಗೇ ಸಿಗ್ತಿತ್ತು. 




ಕಂಪ್ಯೂಟರ್  ಜಾತಕ ಹೇಳುತ್ತಂತೆ .ಕುತೂಹಲ ತಾಳಲಾರದೆ ಹೆಡ್ ಫೋನ್ ಕಿವಿಗೆ ಲಗತ್ತಿಸಿದೆ . ಈ ಕಂಪ್ಯೂಟರ್ ಗೆ  ನನ್ನ  ಯಾವ ಇನಫಾರ್ಮೇಶನ್ ಬೇಡವಂತೆ.  ಹೆಡ್ ಫೋನ್ ಹಾಕಿಕೊಂಡ ಮೇಲೆ  ಅದು ನಮ್ಮ ದೇಹ ಸ್ಥಿತಿ ಪರಿಸ್ಕರಿಷಿ ಜಾತಕ ನುಡಿಯುತ್ತಂತೆ.  ಹೆ ಹೆ.  ಈ ಟೆಕ್ನಾಲಜಿ ಇನ್ನು ಹೊರ ಪ್ರಪಂಚಕ್ಕೆ ಪರಿಚಯವೇ ಇಲ್ಲ. ಆಗಲೇ ಈ ಜಾತ್ರೆಯಲ್ಲಿ ಬಂದಾಗಿದೆ. ಖುಷಿಯಿಂದ ಹತ್ತು ರೂಪಾಯಿ ಕೊಟ್ಟು ಮುನ್ನಡೆದೆ.

ನೀರಿನಿಂದ  ಗುಳ್ಳೆ ಉದುದುತ್ತಿದ್ದವ ಆಗಲೇ ಚಿಕ್ಕ ಹುಡುಗರನ್ನು ಆಕರ್ಷಿಸಿದ್ದ.

ಅಚ್ಚು ಮೆಚಿನ ಸಿನಿಮ ನಟರ ಫೋಟೋಗಳಿಗೂ ಜನ ಮುಗಿ ಬಿದ್ದಿದ್ದರು.

ತರ ತರಹದ ಆಟಿಗೆ ಸಾಮಾನುಗಳ ಮಳಿಗೆಗಳು .














ಅಬ್ಬ ಒಂದು ಜಾತ್ರೆ ಎಷ್ಟೆಲ್ಲ ನೆನಪುಗಳನ್ನು ಬಿತ್ತುತ್ತೆ .. ಈ ತರಹದ ಆಚರಣೆಗಳನ್ನು ನಮ್ಮ ಮುಂದಿನ ಪೀಳಿಗೆಗೆ ಉಳಿಸಿ ಬೆಳಸಬೇಕಾದ ಅವಶ್ಯಕತೆ ಇದೆ. 

2 comments:

Jayashree said...

nija jaatreginta illi padagala jaatre tumba channagide :)

Sudhir said...

Thanks Jayashree. . :)